*ಅಕ್ಷರ ರಾಮಾಯಣ*
*ಅಕ್ಷರ ರಾಮಾಯಣ*
*ಅ*ಯೋಧ್ಯೆಯರಸನು ದಶರಥನು
*ಆ*ತ್ಮಜರು ಬೇಕೆಂಬ ಬಯಕೆಯ ಹೊತ್ತಿಹನು
*ಇ*ಷ್ಟಿಯಮಾಡಿದ ಜಗಮೆಚ್ಚಿದ ರೀತಿಯಲಿ
*ಈ*ಶ್ವರ ಕೃಪೆಯಲಿ ದೊರೆಯಿತು ಪಾಯಸವು
*ಉ*ದಾತ್ತ ದೊರೆಯಿತ್ತನು ಮೂವರು ಸತಿಯರಿಗೆ
*ಊ*ಟವ ಮಾಡಲು ಪಡೆದರು ನಾಲ್ವರನು
*ಋ*ಷಿವರ ವಿಶ್ವಾಮಿತ್ರರು ಕೇಳಿದರು ಕಳಿಸು
*ೠ*ಕ್ಷ ಜನರನು ಶಿಕ್ಷಿಸಲು ರಾಮನನು
*ಎ*ಸುಳೆಗಳೊಂದಿಗೆ ದಂಡಕಾರಣ್ಯಕೆ
*ಏ*ಳಿಗೆ ಋಷಿಜನಕೆಂದು ಜತೆಯಲಿ ಲಕ್ಷ್ಮಣನು
*ಒ*ಮ್ಮೆಲೆ ಖರದೂಷಣರ ಬಡಿದು ಜನಕಪುರಕೆ
*ಓ*ಲಗದಲಿ ರಾಮನು ಶಿವಧನುವ ಮುರಿದು
*ಔ*ತ್ಸುಕತೆಯಲಿ ಸೀತಾಮಾಲೆಗೆ ಕೊರಳೊಡ್ಡಿ
*ಅಂ*ಬಾ ಸೀತಾ ಸ್ವಯಂವರ ಸಂಭ್ರಮವು
*ಅಃ*ಅಃ ಶ್ರೀರಾಮ ಸೀತಾ ವಿವಾಹ ವೈಭವವು
*ಕ*ಟುವರ ಬೇಡಿದಳು ಕೈಕೇಯಿ ದಶರಥನ
*ಖ*ತಿಗೊಳ್ಳದೆ ಸೀತಾಲಕ್ಷ್ಮಣರೊಡನೆ
*ಗ*ಮನ ಕಾನನಕೆ ಉಟ್ಟು ನಾರುಮಡಿ
*ಘ*ಟಸಂಭವನಿತ್ತನು ಹರಿಚಾಪವನು
*ಙ* ಙ ಅನ್ನುತ ಪ್ರಾಣಿಗಳೊಡನಾಡಿದಳು ಸೀತೆ
*ಚ*ಳಿಗಾಳಿ ಉರಿಬಿಸಿಲ ಸಹಿಸುತ ರಾಘವನು
*ಛ*ವಿಗುಂದದೆ ಕಾಡಲಿ ಕಾಲವ ಕಳೆಯುತಲಿರಲು
*ಜ*ಯಜಯ ರಾಘವ ಎನ್ನುತ ಭರತನು ಬಂದು
*ಝ*ಗಮಗಿಸುವ ರಾಮಪಾದುಕೆಗಳ ಪಡೆಯಲು
*ಜ್ಞಾ*ನಿವರೇಣ್ಯ ರಘುಕುಲತಿಲಕ ತಮ್ಮನ ತಬ್ಬಿದನು
*ಟ*ವುಳಿಯಾಡದೆ ರಾಜ್ಯವ ನೀಯುವೆನು
*ಠ*ಕ್ಕೆಯ ಹಾರಿಸುವೆ ಎನೆ ರಾಮನು ಖಂಡಿಸಿದ
*ಡ*ನಿಯುಳಿಯಲು ಪಾದುಕೆಗಳ ಕೈಗೊಂಡು
*ಢ*ಕ್ಕೆಯ ಬಾರಿಸುವನೆ ಭರತನು
*ಣ*ಣ ಣಣ ಶಬ್ದವು ಎಲ್ಲೆಡೆ ಕೇಳಿಸಿತು
*ತ*ರುಣಿಯ ಮಾತನು ಲೆಕ್ಕಿಸಿ ರಾಘವ
*ಥ*ಳಥಳಿಪ ಜಿಂಕೆಯ ಹಿಂದೋಡಿದನು
*ದ*ನಿರಾಮದೆನುತ ಅತ್ತ ತೆರಳಿದ ಲಕ್ಷ್ಮಣನು
*ಧ*ಣಿಗಳಾಶ್ರಮ ಸೇರುವ ಮೊದಲೆ
*ನ*ಲ್ಲೆಯನಪಹರಿಸಿದ ದಶಶಿರ ರಾವಣನು
*ಪ*ತ್ನಿಯ ಕದ್ದ ಲಂಕಾಪತಿ ಕೊಂದು ಸೀತಾ
*ಫ*ಲ ಪಡೆಯಲು ಸುಗ್ರೀವ ಗೆಳೆತನ ರಾಮನಿಗೆ
*ಬ*ಲಿಷ್ಟ ಜಟಾಯುವಿಂದ ಉಪಕೃತ ರಾಘವ
*ಭ*ವಭಾದೆಯ ಕಳೆಯಲು ಹರಸಿದನು
*ಮ*ರ್ಕಟವೀರ ಹನುಮನ ಮೈತ್ರಿಯ ಬೆಳೆಸಿದನು
*ಯ*ಮಪುರಿಗಟ್ಟಿದ ರಾಮನು ವಾಲಿಯನು
*ರ*ಮಣೀಯ ವಾರ್ತೆ ತಂದನು ಮಾರುತಿಯು
*ಲ*ವಣಾಂಬುಧಿಗೈ ತಂದರು ವಾನರರು
*ವ*ತ್ಸಲನಾಶ್ರಯವಿತ್ತು ವಿಭೀಷಣನಿಗೆ
*ಶ*ರಧಿಯ ದಾಟಿ ಯುದ್ದವ ಹೂಡಿದರು
*ಷ*ಡ್ಗುಣ ಸಹಿತನು ರಾವಣನ ಕೊಂದು
*ಸ*ತಿಯೊಡಗೂಡಿ ಅಯೋಧ್ಯೆಗೆ ಹೊರಡಲು
*ಹ*ನುಮನು ಭರತಗೆ ವಿಷಯವ ತಿಳುಹಿದನು
*ಳ*ಕ್ಷ್ಮೀವಲ್ಲಭನು ಚಂದದಿ ರಾಜ್ಯವನಾಳಿದನು
*ಕ್ಷ*ಮಾಪೂರ್ಣ ರಾಮಚಂದ್ರನು ಎಲ್ಲರನ್ನೂ ಕಾಪಾಡಲಿ…
(ಇಷ್ಟು ಸುಂದರವಾದ “ಅಕ್ಷರ ರಾಮಾಯಣ”ವನ್ನು ರಚಿಸಿದ ಕವಿ ಅಜ್ಞಾತ. ಕವಿಗೆ ಗೌರವ ಪೂರ್ವಕ ನಮಸ್ಕಾರಗಳು. ನಿಮಗೆ ಗೊತ್ತಿದ್ದರೆ ತಿಳಿಸಿ. ೧೯೫೮-೫೯ರ ಪತ್ರಿಕೆಯಿಂದ ಸಂಗ್ರಹ.
Leave a Reply