ಗಾಯತ್ರಿ ಮಂತ್ರಕ್ಕೊಂದು ವಿವರಣೆ

ಗಾಯತ್ರಿ ಮಂತ್ರಕ್ಕೊಂದು ವಿವರಣೆ

ಗಾಯತ್ರಿ ಛಂದಸ್ಸು ಅಂದರೆ ಎಂಟು ಅಕ್ಷರಗಳ ಮೂರು ಪಾದದ (ಸಾಲುಗಳ) ಮಂತ್ರ, ಒಟ್ಟು 24 ಅಕ್ಷರಗಳ ಒಂದು
ಛಂದಸ್ಸು…

ಓಂ ಭೂರ್ಭುವ ಸ್ವಃ (ಸುವಃ – ಯಜುರ್ವೇದ ಪಾಠ) ಇವು ಮೂರು ಓಂಕಾರ ಸಹಿತವಾದ ವ್ಯಾಹೃತಿಗಳು

ಓಂ ಭೂರ್ಭುವಸ್ವಃ
ತತ್ಸವಿತುರ್ವರೇಣ್ಯಂ
ಭರ್ಗೋದೇವಸ್ಯ ಧೀಮಹಿ
ಧಿಯೋ ಯೋನಃ ಪ್ರಚೋದಯಾತ್||

ಇದು ಜಪದಲ್ಲಿ ಉಚ್ಚರಿಸುವ ವ್ಯಾಹೃತಿ ಸಹಿತವಾದ ವಿಶ್ವಾಮಿತ್ರ ಗಾಯತ್ರಿ ಎಂದು ಕರೆಯಲ್ಪಡುವ “ಗಾಯತ್ರಿ ಮಂತ್ರ”…

ಅದರ ಪದ ವಿಭಾಗ ಹೀಗಿದೆ

ಓಂ , ಭೂಃ , ಭುವಃ , ಸ್ವಃ (ಸುವಃ)
ತತ್ , ಸವಿತುಃ , ವರೇಣಿಯಂ, ಭರ್ಗಃ . ದೇವಸ್ಯ , ಧೀಮಹಿ , ಧಿಯಃ ,ಯಃ , ನಃ , ಪ್ರಚೋದಯಾತ್ ….

ನಾವು ನಿತ್ಯ ಜಪಿಸುವ ಗಾಯತ್ರಿ ಛಂದಸ್ಸಿನ ಮಂತ್ರ ಭಗವಂತನ ಸೂರ್ಯಾಂತರ್ಗತ ರೂಪವಾದ ನಾರಾಯಣನನ್ನು ಕುರಿತಾಗಿದ್ದು “ಸೂರ್ಯನಾರಾಯಣ ಮಂತ್ರ” ಅಥವಾ “ವಿಶ್ವಾಮಿತ್ರ ಗಾಯತ್ರಿಮಂತ್ರ”ವಾಗಿ, ಬಳಕೆಯಲ್ಲಿ “ಗಾಯತ್ರಿ ಮಂತ್ರ” ಎಂದು ಪ್ರಸಿದ್ಧಿ ಪಡೆಯಿತು…

ಈ ಗಾಯತ್ರೀ ಮಂತ್ರದಲ್ಲಿ ಒಟ್ಟು 24 ಅಕ್ಷರಗಳಿವೆ… ಅವು ಭಗವಂತನ ಕೇಶವಾದಿ ಚತುರ್ವಿಂಶತಿ ಮೂರ್ತಿಗಳ ಉಪಾಸನೆಗಾಗಿ ಇವೆ… ಅಂದರೆ ಸಂಧ್ಯಾವಂದನೆಯಲ್ಲಿ ಹೇಳುವ :

ಕೇಶವ, ನಾರಾಯಣ, ಮಾಧವ, ಗೋವಿಂದ, ವಿಷ್ಣು , ಮಧುಸೂದನ, ತ್ರಿವಿಕ್ರಮ, ವಾಮನ, ಶ್ರೀಧರ, ಹೃಷೀಕೇಶ, ಪದ್ಮನಾಭ, ದಾಮೋದರ, ಸಂಕರ್ಷಣ, ವಾಸುದೇವ, ಪ್ರದ್ಯುಮ್ನ , ಅನಿರುದ್ಧ , ಪುರುಷೋತ್ತಮ, ಅಧೋಕ್ಷಜ, ನರಸಿಂಹ, ಅಚ್ಯುತ, ಜನಾರ್ದನ, ಉಪೇಂದ್ರ, ಹರಿ , ಕೃಷ್ಣ….

ಇವೇ ಆ 24 ಮೂರ್ತಿಗಳು.. ಗಾಯತ್ರಿ ಪ್ರತಿಪಾದ್ಯವಾದ 24 ಭಗವಂತನ ರೂಪಗಳು…

ಅಷ್ಟೇ ಅಲ್ಲ ಗಾಯತ್ರಿಯಲ್ಲಿ ಹತ್ತು ಶಬ್ದಗಳಿವೆ… ಆ 10 ಶಬ್ದಗಳು ಭಗವಂತನ 10 ಅವತಾರದ ರೂಪಗಳನ್ನು ಹೇಳುವ ಶಬ್ದಗಳು…

ಮೊದಲನೆಯ ಶಬ್ದ – ತತ್

“ತತ್” ಭಗವಂತನ ಮತ್ಸ್ಯಾವತಾರವನ್ನು ಹೇಳುವ ಶಬ್ದ . ವೈವಸ್ವತ ಮನು “ಶ್ರಾದ್ಧದೇವ ” ಅರ್ಘ್ಯ ಕೊಡಬೇಕು ಅಂತ ಬೊಗಸೆಯಲ್ಲಿ ನೀರು ಹಿಡಿದಾಗ, ಭಗವಂತ ಒಂದು ಚಿಕ್ಕ ಮೀನಾಗಿ ಬೊಗಸೆಯ ನೀರಿನಲ್ಲಿ ಬಿದ್ದ. ನಂತರ ಬೊಗಸೆಯಿಂದ ಪಾತ್ರೆಗೆ ಬಿದ್ದು ದೊಡ್ಡದಾದ , ನಂತರ ಹಂಡೆಯಲ್ಲಿ ಹಾಕಿದಾಗ ಅಲ್ಲಿ ಹಂಡೆ ತುಂಬುವಷ್ಟು ದೊಡ್ಡದಾದ, ನಂತರ ಸರೋವರಕ್ಕೆ ಬಿಟ್ಟಾಗ ಸರೋವರವೆಲ್ಲ ತುಂಬುವಷ್ಟು ದೊಡ್ಡದಾದ, ನಂತರ ಸಮುದ್ರ ಸೇರಿ ಸಮುದ್ರವನ್ನೇ ತುಂಬುವಷ್ಟು ದೊಡ್ಡದಾದ…. ಇದು ಭಗವಂತನ ಮೊದಲ ಅವತಾರ…
ತತ- ಅಂದರೆ ವಿಸ್ತಾರಗೊಳ್ಳುವುದು. ಹೀಗೆ ತತವಾಗಿ, ತತವಾಗಿ, ವಿತತವಾಗಿ ಸಮುದ್ರವನ್ನೆಲ್ಲ ತುಂಬುತ್ತಾ ಪ್ರಳಯಕಾಲದಲ್ಲಿ ಋಷಿಗಳ ದಡಹಾಯಿಸಿದ ರೂಪ ಯಾವುದೋ ಅದೇ “ಮತ್ಸ್ಯಾವತಾರ”.

ಸವಿತುಃ – ಅಂದರೆ ಕೂರ್ಮಾವತಾರ

ಸವಿತಾ ಅಂದರೆ ಸವನ. ಸೋಮಲತೆಯನ್ನು ಕುಟ್ಟಿ ಅದರಿಂದ ರಸತೆಗೆಯುವ ಕ್ರಿಯೆಗೆ ಸವನ ಅನ್ನುತ್ತಾರೆ…

ದೇವ-ರಾಕ್ಷಸರ ಸಮುದ್ರಮಥನ ಕ್ರಿಯೆಯಲ್ಲಿ ಮಂದರಕ್ಕೆ ಬೆನ್ನುಕೊಟ್ಟು ಸಮುದ್ರದಿಂದ ಅಮೃತವನ್ನು ತಂದುಕೊಟ್ಟ ರೂಪ “ಕೂರ್ಮಾವತಾರ”…

ವರೇಣ್ಯಂ – ವರಾಹಾವತಾರ…

ವರೇಣ್ಯ, ವರಾಹ ಎರಡೂ ಪರ್ಯಾಯ ಶಬ್ದಗಳು.. “ಕಪಿರ್ವರಾಹ ಶ್ರೇಷ್ಠಶ್ಚ “. ವರಾಹ ಅಂದರೆ ಶ್ರೇಷ್ಠವಾದದ್ದು , ಎತ್ತರದಲ್ಲಿರುವಂತದು. ಅದೇ ವರೇಣ್ಯ.

ಭಗವಂತ ವರಾಹ ರೂಪದಿಂದ ಆದಿದೈತ್ಯರನ್ನು ಕೊಂದು ಭೂಮಿ ಕುಸಿಯದಂತೆ ತಡೆದು ಮತ್ತೆ ಅದರ ಕಕ್ಷೆಯಲ್ಲಿಟ್ಟ ರೂಪ. ಅದೇ ವರಾಹಾವತಾರ….

“ವರೇಣ್ಯಂ” ಎಂಬುದು ಬರೆಯುವಾಗ ಮಾತ್ರ ಇರುವ ಶಬ್ದ. ಜಪದಲ್ಲಿ ಅದನ್ನು ಬಿಡಿಸಿಯೇ ಹೇಳುವುದು… ಇಲ್ಲದಿದ್ದರೆ ಗಾಯತ್ರಿ ಮಂತ್ರ 23 ಅಕ್ಷರವಷ್ಟೇ ಆಗುತ್ತದೆ… ಬಿಡಿಸಿ ಹೇಳುವ ಅಕ್ಷರ “ಣ್ಯಂ” ಅದೇ ಜಪದಲ್ಲಿ “ಣಿಯಂ” ಆಗುತ್ತದೆ.. ಅದೇ “ವಾಮನ ತ್ರಿವಿಕ್ರಮನಾದಂತೆ”….

‘ಣಿಯಂ – ಣಿ+ಯಂ – ಈ ಎರಡು ಅಕ್ಷರಗಳ ಪ್ರತಿಪಾದ್ಯದೇವತೆ ತ್ರಿವಿಕ್ರಮ ಮತ್ತು ವಾಮನ. ಆದರೆ ಅವು ಎರಡು ಅವತಾರಗಳಲ್ಲ, ಒಂದೇ ಅವತಾರದ ಎರಡು ಮುಖಗಳು ಎಂದು ತೋರಿಸುವುದಕ್ಕಾಗಿ ‘ಣ್ಯಂ’ ಎಂಬುವ ಒಂದೇ ಅಕ್ಷರ ಬಂದಿದೆ. ಆದರೂ ಚತುರ್ವಿಂಶತಿ ಮೂರ್ತಿಗಳಲ್ಲಿ ಅವು ಭಿನ್ನರೂಪಗಳೂ ಹೌದು ಎನ್ನುವುದಕ್ಕಾಗಿ ‘ಣಿಯಂ’ ಎಂದು ಬಿಡಿಸಿ ಉಚ್ಚಾರ.’ (ತಂತ್ರಸಾರ ಸಂಗ್ರಹ ಪೂಜ್ಯ ಶ್ರೀ ಬನ್ನಂಜೆ ಗೋವಿಂದಾಚಾರ್ಯರು)

ಭರ್ಗಃ – ನರಸಿಂಹಾವತಾರ

ಶತ್ರುಗಳನ್ನು ಭರ್ಜನೆ ಮಾಡಿದ ಉಗ್ರರೂಪ… ದುಷ್ಟರನ್ನು, ದೋಷಗಳನ್ನು, ಅಜ್ಞಾನವನ್ನು ನಾಶಮಾಡಿ ಅದರ ಮೂಲಕ “ಭ” ರತಿ ಜ್ಞಾನರೂಪ.. ತಾನು ಜ್ಞಾನಸ್ವರೂಪ ಮತ್ತು ಪ್ರಹ್ಲಾದನನ್ನು ಉದ್ಧಾರ ಮಾಡಿದ ರೂಪ ಎಂದು ತೋರಿಸಿದ “ನರಸಿಂಹಾವತಾರ”…

ದೇವಸ್ಯ – ವಾಮನಾವತಾರ

ದಿವು ವ್ಯವಹಾರೆ. ದೀವ್ಯತಿ ಇತಿ ದೇವಃ.. ಬಲಿಯ ಜೊತೆಗೆ ಮೂರು ಹೆಜ್ಜೆಗಳ ವ್ಯವಹಾರ ಮಾಡಿದ ರೂಪ. ಸ್ಪಷ್ಟವಾಗಿ “ವಾಮನಾವತಾರ”ವನ್ನು ಹೇಳುವ ಶಬ್ದ.

ಧೀಮಹಿ – ಪರಷುರಾಮಾವತಾರ

‘ಮಹಿ’ ಅಂದರೆ ಭೂಮಿ. ದಿನು ಪುಷ್ಟೌ.
ಇಪ್ಪತ್ತೊಂದು ಬಾರಿ ದುಷ್ಟ ಕ್ಷತ್ರಿಯರ ಸಂಹಾರ ಮಾಡಿ ಭೂಮಿಗೆ ಸಂತೋಷವನ್ನು ಕೊಟ್ಟ ರೂಪ “ಪರುಷರಾಮಾವತಾರ”…

ಧಿಯಃ – ರಾಮಾವತಾರ

‘ಯಂ’ ಅಂದರೆ ವಾಯುಬೀಜ. “ಯಂ” ಅಂದರೆ ಜ್ಞಾನ ಸ್ವರೂಪರಾದಂತ ವಾಯುದೇವರು… ಅವರಿಗೆ “ದಿನೋತಿ”
ಆನಂದವನ್ನು ಕೊಟ್ಟ ರೂಪ “ಧಿಯಃ” ರಾಮರೂಪ. ಅದೇ “ರಾಮಾವತಾರವ”

ಯಃ – ಕೃಷ್ಣಾವತಾರ

“ಯ”ಕಾರ ವಾಚ್ಯನಾಗಿ , ಯಃ-ಜ್ಞಾನಾವತಾರ. ಭಗವದ್ಗೀತೆಯ ಮೂಲಕ ಸಮಸ್ತ ವೇದಸಾರವನ್ನು ಆವಿಷ್ಕಾರ ಮಾಡಿರತಕ್ಕ ಪೂರ್ಣಜ್ಞಾನ ಸ್ವರೂಪನಾದವ ಕೃಷ್ಣ .ಅದೇ “ಕೃಷ್ಣಾವತಾರ”.

ನಃ – ಬುದ್ಧಾವತಾರ

ನಃ ಅಂದರೆ ಬುದ್ಧ. ಸರ್ವಂ ಶೂನ್ಯಂ, ಸರ್ವಂ ಕ್ಷಣಿಕಂ… ಏನೂ ಇಲ್ಲ , ಎಲ್ಲವೂ ಕ್ಷಣಿಕ ಅಂತ ಹೇಳಿ ನ.. ನ… ಅಂತ ಉಪದೇಶ ಮಾಡಿದವ ಬುದ್ಧ . ಬುದ್ಧ ನಮ್ಮ ಹತ್ತಿರದ ಅವತಾರ, ಆದರೂ ಅದು ಮೋಹಾವತಾರ. ಆದ್ದರಿಂದ ನಃ – ಬುದ್ಧಾವತಾರದ ಉಪಾಸನೆ ಮಾಡಬೇಡಿ ಅಂತ ಹೇಳಿತು ಭಾಗವತ.. ಇದು “ಬುದ್ಧಾವತಾರ”…

ಪ್ರಚೋದಯಾತ್ – ಕಲ್ಕ್ಯಾವತಾರ

ಯಃ ಧರ್ಮಂ ಪ್ರಚೋದಯತಿ… ಕಲಿಯುಗದ ಅಂತ್ಯದಲ್ಲಿ ಧರ್ಮದ ಪ್ರಚೋದನೆಗಾಗಿ ಬಂದವ ಕಲ್ಕಿ..
ಇದು “ಕಲ್ಕ್ಯಾವತಾರ”…

ಹೀಗೆ ಗಾಯತ್ರಿಯ ಹತ್ತು ಶಬ್ದಗಳು ಸ್ಪಷ್ಟವಾಗಿ ಭಗವಂತನ ಹತ್ತು ರೂಪಗಳನ್ನು ಹೇಳುತ್ತವೆ…

****
ಗಾಯತ್ರಿಮಂತ್ರ – ದೇಹದ ನಾಡಿ ಶುದ್ಧಿ

ಇನ್ನು ಜಪದ ಸಂಖ್ಯೆ ಎಷ್ಟು? ಅನ್ನುವುದಕ್ಕೂ ಕರಾರುವಾಕ್ಕಾದ ಗಣಿತ ಇದೆ… ಗಾಯತ್ರಿ ಮಂತ್ರವನ್ನು ದಿನದಲ್ಲಿ ಮೂರು ಕಾಲ (ತ್ರಿಸಂಧ್ಯಾ) ದಲ್ಲಿ ಜಪಿಸುತ್ತಾರೆ.. (ಪ್ರಾತಃ , ಮಧ್ಯಾಹ್ನ ಮತ್ತು ಸಾಯಂಕಾಲ…)

ಒಂದು ಬಾರಿ ಹೆಚ್ಚೆಂದರೆ 1000 ಗಾಯತ್ರಿ ಮಾಡಬೇಕು. ಆಗ ದಿನಕ್ಕೆ 3000 ಆಯಿತು… ಇದಕ್ಕಿಂತ ಹೆಚ್ಚಿಗೆ ಮಾಡಬಾರದು..

ಏಕೆಂದರೆ ಆಯುರ್ವೇದ ಶಾಸ್ತ್ರದ ಪ್ರಕಾರ ನಮ್ಮ ದೇಹದಲ್ಲಿರುವ ಪ್ರಧಾನ ನಾಡಿಗಳು 72000 (ದ್ವಾಸಪ್ತತಿಸಹಸ್ರಾಣಿ ಹೃದಯಸ್ಯ ನಾಡ್ಯಃ) ಅದು ನಮ್ಮ ದೇಹದ ಬಲಭಾಗದಲ್ಲಿ 36000 , ಎಡಭಾಗದಲ್ಲಿ 36000 ಎಂದು ವಿಭಾಗಿಸಲ್ಪಟ್ಟಿದೆ. ಆದ್ದರಿಂದಲೇ ನಮ್ಮ ಪ್ರಾಚೀನರು ಆದೇಶ ಮಾಡಿದರು ಒಂದು ದಿನದಲ್ಲಿ ನಾವು ಮಾಡತಕ್ಕ ಗಾಯತ್ರಿ ಮಂತ್ರ ಜಪ, ಒಟ್ಟು ಅಕ್ಷರ ಸಂಖ್ಯೆಯಲ್ಲಿ ಈ ಸಂಖ್ಯೆಯನ್ನು (72000) ಮೀರಬಾರದು ಎಂದು… ಆದ್ದರಿಂದ ಗಾಯತ್ರಿ ಸಂಖ್ಯೆ 24 ಅಕ್ಷರ * 3000ಜಪ ದಿನಕ್ಕೆ =72000 ಅಕ್ಷರ ಜಪವಾಯಿತು…

ವೇದದಲ್ಲಿ ಒಂದು ಮಾತಿದೆ… ವೇದಾಕ್ಷರಾಣಿ ಯಾವಂತಿ ಪಠಿತಾನಿ ದ್ವಿಜಾದಿಭಿಃ |
ತಾವಂತಿ ಹರಿನಾಮಾನಿ ಪಠಿತಾನಿ ನಸಂಶಯಃ || ಅಂತ…

ಹಾಗೆ ಗಾಯತ್ರಿಯ ಒಂದೊಂದು ಅಕ್ಷರ ಒಂದೊಂದು ಹರಿ ನಾಮ ಆದಾಗ ಅದು ನಮ್ಮ ದೇಹದ 72000 ಪ್ರಧಾನ ನಾಡಿಗಳಲ್ಲಿರುವ ಭಗವಂತನ 72000 ರೂಪಗಳ ಅನುಸಂಧಾನವೂ ಆಯಿತು… ನಮ್ಮ ಗಾಯತ್ರಿ ಜಪದಿಂದ ಉತ್ಪತ್ತಿಯಾದ ತೇಜಸ್ಸು ಆ 72000 ನಾಡಿಗಳ ಶುದ್ಧಿಗೆ ಕಾರಣವಾಗಿ ಸುಗಮ ರಕ್ತ ಸಂಚಾರಕ್ಕೆ ಅನುವು ಮಾಡಿಕೊಟ್ಟಿತು ಅದು ಶಕ್ತಿ ರೂಪವಾಗಿ ನಮ್ಮಲ್ಲಿ ಕೆಲಸಮಾಡುತ್ತದೆ.. ಆದ್ದರಿಂದಲೇ ನಮ್ಮ ಜಪ ಸಂಖ್ಯೆ 72000 ವನ್ನು ಮೀರಬಾರದು..
ಹೆಚ್ಚು ಜಪದಿಂದ ತೇಜಸ್ಸು ಹೆಚ್ಚಾಗುವುದಲ್ಲ , ಹೆಚ್ಚು ವೇಲ್ಟೇಜ್ ಸಪ್ಲೈನಿಂದ ಬಲ್ಬು ಬರ್ನಾದಂತೆ…

ಆದ್ದರಿಂದಲೇ ಹಿಂದಿನವರು ಗಾಯತ್ರಿಗೆ ಇಷ್ಟು ಮಹತ್ವ ಕೊಟ್ಟದ್ದು… ಓಂಕಾರದ ಮೂರು ಅಕ್ಷರಗಳೇ (ಅ, ಉ, ಮ) ಮೂರು ವ್ಯಾಹೃತಿಗಳಾದವು (ಭೂಃ ಭುವಃ ಸುವಃ) ಮೂರು ವ್ಯಾಹೃತಿಗಳು ಬೆಳೆದು ಮೂರು ಪಾದದ ಗಾಯತ್ರಿಯಾಯಿತು… ಈ ಮೂರು ಪಾದದ ಗಾಯತ್ರಿಯೇ ಬೆಳೆದು ಮೂರು ವರ್ಗದ ಪುರುಷಸೂಕ್ತ ಆಯಿತು… ಮೂರು ವರ್ಗದ ಪುರುಷಸೂಕ್ತ ಬೆಳೆದು ಮೂರು ವೇದಗಳಾದವು… ಆದ್ದರಿಂದಲೇ ಗಾಯತ್ರಿಯನ್ನು “ವೇದಮಾತಾ” ಅಂತಲೂ ಕರೆಯುತ್ತಾರೆ…

Leave a Reply

Your email address will not be published. Required fields are marked *