ಕನ್ನಡಿಗರೇ, ತುಳುವರಿಂದ ಭಾಷಾ ಪ್ರೇಮ ಕಲಿಯಿರಿ..!

*ಕನ್ನಡಿಗರೇ, ತುಳುವರಿಂದ ಭಾಷಾ ಪ್ರೇಮ ಕಲಿಯಿರಿ..!*

– ವಿಶ್ವೇಶ್ವರ್ ಭಟ್
ವಿಶ್ವವಾಣಿ

ಇತ್ತೀಚೆಗೆ ನಾನು ಬೆಂಗಳೂರಿನಿಂದ ಫ್ರಾಂಕ್‌ಫರ್ಟ್‌ಗೆ ಹೋಗುತ್ತಿದ್ದಾಗ ವಿಮಾನದಲ್ಲಿ ಪಕ್ಕದಲ್ಲಿ ಕುಳಿತ, ಹೆಚ್ಚು-ಕಮ್ಮಿ ನನ್ನ ವಯಸ್ಸಿನವರೊಬ್ಬರ ಪರಿಚಯವಾಯಿತು. ನನ್ನ ಹೆಸರನ್ನು ಕೇಳಿದವರೇ ‘ನೀವು ಮಂಗಳೂರಿನವರಾ?’ ಎಂದು ಕೇಳಿದರು. ಈ ಪ್ರಶ್ನೆಯನ್ನು ಅವರೊಬ್ಬರೇ ಅಲ್ಲ, ಅನೇಕರು ನನ್ನನ್ನು ಕೇಳಿದ್ದಾರೆ. ಈ ಪ್ರಶ್ನೆಗೆ ನಾನು ಹೌದು ಎಂದೇ ಉತ್ತರಿಸುತ್ತೇನೆ. ಕಾರಣ ನಾನೂ ಕರಾವಳಿಯವನೇ. ಕರಾವಳಿಯವರನ್ನು ಮಂಗಳೂರಿನವರು ಎಂದು ಹಳೆ ಮೈಸೂರಿಗರು ಹೇಳುತ್ತಾರೆ. ಅವರ ಪ್ರಶ್ನೆಗೆ ‘ಹೌದು’ ಎನ್ನುತ್ತಲೇ ನೋಡದೇ ತುಳುವಿನಲ್ಲಿ ಮಾತುಕತೆ ಆರಂಭಿಸಿದರು. By default ನನಗೆ ತುಳು ಬಂದೇ ಬರುತ್ತದೆಂದು ಭಾವಿಸಿದ ನನ್ನ ಸಹ ಪ್ರಯಾಣಿಕರು, ಮಾತಿನಲ್ಲಿ ನನಗಿಂತ ಮುಂದೆ ಸಾಗಿ ಬಡಬಡನೆ ತಮ್ಮ ಆನಂದ ವ್ಯಕ್ತಪಡಿಸಿದರು. ಅವರು ತುಳುನಲ್ಲಿ ಹೇಳಿದ್ದನ್ನು ಅರ್ಥೈಸಿಕೊಳ್ಳುವುದಾದರೆ, ತುಳು ಮಾತಾಡುವವರು ಸಿಕ್ಕಿದರಲ್ಲಾ ನನ್ನ ಅದೃಷ್ಟ, ಖುಷಿಯಿಂದ ಮಾತಾಡುತ್ತಾ ಹೋಗಬಹುದು. ಇಲ್ಲದಿದ್ದರೆ ವಿಮಾನ ಪ್ರಯಾಣ ಬೋರಾಗುತ್ತಿತ್ತು.’

ನನಗೆ ತುಳು ಬರುವುದಿಲ್ಲ ಎಂದು ಹೇಗೆ ಹೇಳುವುದು ಎಂಬ ಕಸಿವಿಸಿ ಕಾಡಲಾರಂಭಿಸಿತು. ನನ್ನಿಂದ ಪ್ರತಿಕ್ರಿಯೆಯನ್ನೇ ನಿರೀಕ್ಷಿಸದೇ ತುಳುನಲ್ಲಿ ಖುಷಿಖುಷಿಯಿಂದ ಮಾತಾಡುತ್ತಿದ್ದರು. ನಾನು ಅವರು ಹೇಳಿದ್ದಕ್ಕೆ ನಗುತ್ತಲೇ ತಲೆಹಾಕುತ್ತಿದ್ದೆ. ಅಷ್ಟೊತ್ತಿಗೆ ನಾಲ್ಕೈದು ನಿಮಿಷ ಆಗಿರಬಹುದು, ನನ್ನಿಂದ ತುಳುನಲ್ಲಿ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ, ಅವರನ್ನು ಬೇಸ್ತು ಕೆಡವಬಾರದೆಂದು ನಾನು ‘ಸಾರ್, ನಾನು ಕರಾವಳಿಯವ ಎಂಬ ಕಾರಣಕ್ಕೆ ಮಂಗಳೂರಿನವ ಎಂದೆ. ನನ್ನ ಊರು ಕುಮಟಾ. ಕಳೆದ ಮೂವತ್ತು ವರ್ಷದಿಂದ ಬೆಂಗಳೂರಿನಲ್ಲಿ ವಾಸ. *ಕ್ಷಮಿಸಿ, ನನಗೆ ತುಳು ಬರೊಲ್ಲ’ ಎಂದೆ.* ಅವರ ಮುಖ ನೋಡಬೇಕಿತ್ತು. ನನ್ನನ್ನು ಒಂಥರಾ ಕ್ಯಾಕರಿಸಿ ನೋಡಿದರು. ಅವರಿಗೆ ನಿರಾಸೆಯಾದುದು ಅವರ ನೋಟದಲ್ಲೇ ಸ್ಪಷ್ಟವಾಯಿತು. ತುಳು ಬಾರದ ಈ ಮನುಷ್ಯನ ಜತೆ ಒಂಬತ್ತು ತಾಸು ಅಕ್ಕ ಪಕ್ಕದಲ್ಲೇ ಕುಳಿತು ಪ್ರಯಾಣ ಮಾಡುವುದು ಹೇಗೆ, ನನ್ನ ಕರ್ಮ ಎಂದು ಅವರಿಗೆ ಅನಿಸಿರಲಿಕ್ಕೆ ಸಾಕು.

ಮುಂದೇನಾಯ್ತು ಕೇಳಿ. ಮುಂದಿನ ಒಂಬತ್ತು ತಾಸು ನಮ್ಮ ಮಧ್ಯೆ ಒಂದೆರಡು ಮಾತುಗಳನ್ನು ಬಿಟ್ಟರೆ ಪೂರಾ ಮೌನ. *ಹಾಗಂತ ಅವರಿಗೆ ಕನ್ನಡ ಬರುತ್ತಿತ್ತು ಆದರೂ ನನ್ನ ಜತೆಗೆ ಮಾತಾಡಬೇಕೆಂದು ಅವರಿಗೆ ಅನಿಸಲೇ ಇಲ್ಲ.* ನಾನು ಅವರಿಗೆ ಪ್ರಯೋಜನಕ್ಕೆ ಒಬ್ಬ ಶುಷ್ಕ ವ್ಯಕ್ತಿ ಎಂದು ಅನಿಸಿರಬಹುದು. ತಮ್ಮ ಪಾಡಿಗೆ ನಿದ್ದೆ ಹೋಗಿಬಿಟ್ಟರು.

ಕೆಲವು ದಿನಗಳ ಹಿಂದೆ, ನಾನು ಅಬುಧಾಬಿಗೆ ಹೋಗಿದ್ದೆ. *ಖ್ಯಾತ ಉದ್ಯಮಿ ಹಾಗೂ ಹೆಮ್ಮೆಯ ಕನ್ನಡಿಗರಾದ ಡಾ.ಬಿ.ಆರ್.ಶೆಟ್ಟಿ ಅವರ ಆಫೀಸಿಗೆ ಹೋಗಿದ್ದೆ. ಶೆಟ್ಟಿಯವರು ಆತ್ಮಿಯವಾಗಿ ಆಲಂಗಿಸಿ ಬರಮಾಡಿಕೊಂಡು, ತುಳುನಲ್ಲಿಯೇ ಮಾತುಕತೆ ಆರಂಭಿಸಿದರು.* ನನ್ನ ಮುಖಭಾವ ನೋಡಿ ಅವರಿಗೇ ಅನ್ನಿಸಿರಬೇಕು, ‘ಭಟ್ರೇ ನಿಮಗೆ ತುಳು ಬರುವುದಾ?’ ಎಂದು ಕೇಳಿದರು. ನನ್ನ ಅಡ್ಡ ಹೆಸರು ಕೇಳಿ ಬಹಳ ಜನ ಈ ಕೇಳಿದ್ದಾರೆ. ನಾನು ತಡವರಿಸುತ್ತಾ ಅಥವಾ ಒಲ್ಲದ ಮನಸ್ಸಿನಿಂದ ‘ಇಲ್ಲ’ ಎಂದೆ. ಡಾ.ಶೆಟ್ಟಿಯವರಿಗೆ ಒಂದು ಸಲ ಯಾರೋ ಕೈ ಜಗ್ಗಿ ಎಳೆದಂತಾಗಿರಬಹುದು. ಅದು ಅವರ ಪ್ರತಿಕ್ರಿಯೆಯಿಂದ, ಮುಖಭಾವದಿಂದ ಗೊತ್ತಾಯಿತು. ಒಂದು ವೇಳೆ ನನಗೆ ತುಳು ಬಂದಿದ್ದರೆ, ಕತೆಯೇ ಬೇರೆಯಿತ್ತು. *ಅಲ್ಲಿಂದ ಎದ್ದು ಬರುವಾಗ ಡಾ.ಶೆಟ್ಟಿಯವರು ನನ್ನನ್ನು ಆಲಂಗಿಸದೇ ಕಳಿಸಿಕೊಡುತ್ತಿರಲಿಲ್ಲ.*

ಅದೇ ದಿನ ಸಾಯಂಕಾಲ ಒಂದು ಔತಣಕೂಟ. ಅಬುಧಾಬಿಯಲ್ಲಿರುವ ಆಮಂತ್ರಿತ ಕನ್ನಡ ಉದ್ಯಮಿಗಳ ಸಭೆ. ಅಲ್ಲಿಗೆ ಆಗಮಿಸಿದವರಲ್ಲಿ ಬಹುತೇಕ ಮಂದಿ ಅವಿಭಜಿತ ಕನ್ನಡ ಜಿಲ್ಲೆಯವರು. ಸುಮಾರು 75 ಮಂದಿ ಆಗಮಿಸಿದ್ದರು. *ಪ್ರತಿಯೊಬ್ಬರೂ ನನ್ನನ್ನು ಮಾತಾಡಿಸಿದ್ದು ತುಳುನಲ್ಲಿ.* ಅವರೆಲ್ಲರೂ ಅಪ್ಪಟ ಕನ್ನಡಿಗರೇ. ಆದರೆ ಮಾತಾಡುತ್ತಿದ್ದುದು ಮಾತ್ರ ತುಳುನಲ್ಲಿ. *ಅವರಲ್ಲಿ ಹಿಂದುಗಳು, ಕ್ರಿಶ್ಚಿಯನ್‌ರು, ಮುಸ್ಲಿಮರಿದ್ದರು.* ಆದರೆ ಮಾತಾಡುತ್ತಿದ್ದುದು ಮಾತ್ರ ತುಳುನಲ್ಲಿ. ಜಗತ್ತಿನಲ್ಲಿ ಎಷ್ಟೆಲ್ಲಾ ಭಾಷೆಗಳಿವೆ. ಅವುಗಳನ್ನು ಕಲಿಯದಿದ್ದುದು ನನಗೆ ಬೇಸರವಾಗಲಿ, ವಿಷಾದವಾಗಲಿ ಆಗಿಲ್ಲ. *ಆದರೆ ತುಳು ಕಲಿಯದೇ ಇದ್ದುದು ದೊಡ್ಡ ಕೊರತೆ ಎಂದು ತುಳು ಭಾಷಿಕರ ಮಧ್ಯೆ ಒಡನಾಡುವಾಗ ಅನ್ನಿಸಿದ್ದಿದೆ.*

*ಈ ತುಳುನಲ್ಲಿ ಅದೆಂಥ ಮೋಡಿ, ಚುಂಬಕ ಶಕ್ತಿಯಿದೆಯೋ ಕಾಣೆ.* ತುಳು ಮಾತಾಡಿದರೆ ಸಾಕು ಪರಿಚಯ, ಗೆಳೆತನ, ಸಂಬಂಧಕ್ಕೆ ಪಾಸ್‌ಪೋರ್ಟ್ ಮೇಲೆ ವೀಸಾ ಅಂಟಿಸಿದಂತೆ. *ಎಲ್ಲರಿಗೂ ಭಾಷೆ ಕಿವಿಯಲ್ಲಿ ಕೇಳಿಸಿದರೆ, ತುಳು ಮಾತಾಡುವವರಿಗೆ ಹೃದಯದಲ್ಲಿ ಕೇಳಿಸುತ್ತದೆ.* ನನಗೆ ಎಷ್ಟೋ ಸಲ ಅನಿಸಿದೆ, ತುಳು ಸಂವಹನದ ಭಾಷೆ ಅಲ್ಲವೇ ಅಲ್ಲ, *ಅದು ಹೃದಯದ ಭಾಷೆ, ರಕ್ತದ ಭಾಷೆ, ಆತ್ಮ-ಆತ್ಮಗಳ ಭಾಷೆ. ವೈಫೈಗೆ ತುಳು ಭಾಷೆ ಬಂದರೆ, ಪಾಸ್‌ವರ್ಡ್‌ನ್ನು ಸಹ ಕೇಳದೇ ಡೈರೆಕ್ಟ್ ಕನೆಕ್ಟ್ ಮಾಡಿಬಿಡುತ್ತದೆ.* ಯಾವುದೋ ಪ್ರಧಾನಿ ಜತೆ ಒಬ್ಬ ಮಾತಾಡುತ್ತಿದ್ದಾನೆ ಎಂದು ಭಾವಿಸಿ, ಪ್ರಧಾನಿ ಪರಿಚಯವಿರುವ ಒಬ್ಬ ವ್ಯಕ್ತಿ ಅವರಿಬ್ಬರ ಹತ್ತಿರ ಹೋದಾಗ, ಪ್ರಧಾನಿಯವರು ತಮ್ಮ ಜತೆಗಿರುವ ಸ್ನೇಹಿತನನ್ನು ‘ಶೆಟ್ರೇ, ಇವರು ಗೊತ್ತಾ? ಇವರು ಕೂಡ ಶೆಟ್ರು, ದಕ್ಷಿಣ ಕನ್ನಡದವರು’ ಎಂದು ಪರಿಚಯ ಮಾಡಿಕೊಟ್ಟರೆನ್ನಿ. ಅನುಮಾನವೇ ಬೇಡ, ಅವರಿಬ್ಬರೂ ಮಾತಿಗೆ ಶುರುವಿಟ್ಟುಕೊಳ್ಳುವುದೇ ತುಳುವಿನಲ್ಲಿ. ಅಷ್ಟೇ ಆಗಿದ್ದಿದ್ದರೆ ಪರವಾಗಿರಲಿಲ್ಲ, ಅವರಿಬ್ಬರಿಗೂ ಪ್ರಧಾನಿಯವರೊಬ್ಬರನ್ನೇ ಅವರ ಪಾಡಿಗೆ ಬಿಟ್ಟು, ತುಳು ಸಂಭಾಷಣೆಯಲ್ಲಿ ಕಳೆದುಹೋಗದಿದ್ದರೆ ಕೇಳಿ. ಯಾಕಾದರೂ ಪರಿಚಯಿಸಿದೆನೋ ಎಂದು ಅನಿಸದಿದ್ದರೆ ಕೇಳಿ.

ಅದು ತುಳು! ಅದು ಆ ಭಾಷೆಯ ಮಹಿಮೆ, ಮಹಾತ್ಮೆ!
ತುಳು ಭಾಷೆಯಲ್ಲಿ, ಅದೊಂದು ಧರ್ಮ ಎಂದು ಅನೇಕ ಸಲ ಅನಿಸಿದ್ದಿದೆ. ಆದರೆ ಎಲ್ಲ ಧರ್ಮಗಳಲ್ಲೂ ಧರ್ಮಕಂಟಕರಿದ್ದಾರೆ, ಅಧರ್ಮಿಯರಿದ್ದಾರೆ. ಇದನ್ನು ನೋಡಿದರೆ ತುಳು ಒಂದು ಧರ್ಮ ಇದ್ದಿರಲಿಕ್ಕಿಲ್ಲ ಎನಿಸುತ್ತದೆ. *ಕಾರಣ ತುಳುನಲ್ಲಿ ಅದಕ್ಕೆ ಕಂಟಕರಿಲ್ಲ, ಮನೆಹಾಳರಿಲ್ಲ, ಕಲಬೆರಕೆಗಳಿಲ್ಲ. ತುಳು ಅಂದ್ರೆ ಸಾಕು, ಅದು ಧರ್ಮ, ದೇಶ, ಕಾಲ, ಅವಕಾಶಗಳನ್ನೆಲ್ಲ ಮೀರಿದ ಅಸ್ಮಿತೆ ಹಾಗೂ ಅಸ್ತಿತ್ವದ ದ್ಯೋತಕ. ಬಸವಣ್ಣನವರಿಗೇನಾದರೂ ಬರುತ್ತಿದ್ದರೆ, ‘ಇವನಾರವ, ಇವನಾರವ, ಇವನಾರವ ಎಂದೆಣಿಸದಿರಯ್ಯ, ತುಳು ಭಾಷೆ ಬರ್ಪೊಡೆ ಇವ ನಮ್ಮವ, ಇವ ನಮ್ಮವ, ಇವ ನಮ್ಮವ ಎಂದೆಣಿಸಯ್ಯಾ’ ಎಂದು ಬರೆಯುತ್ತಿದ್ದರು!*

ಅದು ತುಳು! ಅದು ಆ ಭಾಷೆಯ ಮೋಡಿ!
ದಕ್ಷಿಣಕನ್ನಡದ ಕೊಂಕಣಿಗರು ಮನೆಯಲ್ಲಿ ಕೊಂಕಣಿ ಮಾತಾಡಬಹುದು, ಮನೆಯ ಅಂಗಳ ದಾಟಿದರೆ ತುಳು. *ಬ್ಯಾರಿಗಳು, ಮೊಗವೀರರು, ಬಂಟರು, ಬೆಸ್ತರು, ಬ್ರಾಹ್ಮಣರು ಮನೆಯಲ್ಲಿ ತಮ್ಮ ತಮ್ಮ ಭಾಷೆ ಮಾತಾಡಬಹುದು. ಆದರೆ ರಸ್ತೆಗಿಳಿದರೆ ಸಾಕು, ಅಲ್ಲಿನ ಗಾಳಿಯಲ್ಲಿರುವ ವೈಫೈ ತುಳು ಹಠಾತ್ತನೆ ಕನೆಕ್ಟ್ ಆಗಿಬಿಡುತ್ತದೆ. ತುಳುನಲ್ಲಿ ಮಾತಾಡಿದರೆ ಪ್ರೀತಿ, ಸಮಾಧಾನ, ಗೌರವ, ನೆಮ್ಮದಿ, ಒಂಥರಾ ನಿರಾಳ ಭಾವ.
*‘ವಿಜಯ ಕರ್ನಾಟಕ’ ಹಾಗೂ ‘ಕನ್ನಡಪ್ರಭ’ದಲ್ಲಿ ನನ್ನೊಂದಿಗೆ ಹದಿನೈದು ವರ್ಷ ಸಹೋದ್ಯೋಗಿಯಾಗಿದ್ದ ಪ್ರತಾಪಸಿಂಹ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ನಾನು ಅದೇ ಸಂದರ್ಭದಲ್ಲಿ ಮೈಸೂರಿಗೆ ಒಂದು ಮದುವೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದೆ. ನನ್ನನ್ನು ಸುತ್ತುವರಿದ ಏಳೆಂಟು ಉದ್ಯಮಿಗಳು, ‘ನಮಗೆ ಪ್ರತಾಪಸಿಂಹ ಅವರನ್ನು ಪರಿಚಯ ಮಾಡಿಸಿ, ನಾವು ಅವರಿಗೆ ಸಹಾಯ ಮಾಡಬೇಕೆಂದು ನಿರ್ಧರಿಸಿದ್ದೇವೆ’ ಎಂದು ಅವರಲ್ಲಿ ಬಹುತೇಕರು ಶೆಟ್ಟರೇ(ಬಂಟರು) ಇದ್ದರು. ಅದು ಬಂಟರ ಮದುವೆಯೇ ಆಗಿತ್ತು. ‘ಪ್ರತಾಪ ಅವರಿಗೆ ನೀವ್ಯಾಕೆ ಸಹಾಯ ಮಾಡಬೇಕೆಂದಿರುವಿರಿ? ನೀವು ಬಿಜೆಪಿಯವರಾ?’ ಎಂದು ಕೇಳಿದೆ. ಅದಕ್ಕೆ ಅವರಲ್ಲೊಬ್ಬರು ಹೇಳಿದರು- ‘ಪ್ರತಾಪ ಓದಿದ್ದು ಉಜಿರೆಯಲ್ಲಿ ಅಲ್ವಾ? ಅವರು ಚೆನ್ನಾಗಿ ತುಳು ಮಾತಾಡ್ತಾರಂತೆ, ಅವರು ನಮ್ಮವರು ಮಾರ್ರೇ!’ ಆ ತುಳು ಅಪರಿಚಿತರನ್ನೂ ನಮ್ಮವ, ನಮ್ಮವ ಎಂದು ಹತ್ತಿರಕ್ಕೆ ಬರಸೆಳೆದು ಬಾಂಧವ್ಯದ ಬೆಸುಗೆ ಬೆಸೆದಿತ್ತು!*

ಆರು ತಿಂಗಳ ಹಿಂದೆ, ನನ್ನ ಸ್ನೇಹಿತರಾದ ಹೇಮಂತ ಶೆಟ್ಟಿ ಜತೆ ದಿಲ್ಲಿಗೆ ಹೋಗಿದ್ದೆ. ಶಾಪಿಂಗ್ ಮಾಲ್‌ನಲ್ಲಿ ನನ್ನ ಸ್ನೇಹಿತ ಶೆಟ್ಟಿ ಅವರಿಗಾಗಿ ಕಾಯುತ್ತಿದ್ದೆ. ಆಗ ಅಲ್ಲಿಗೆ ಆಗಮಿಸಿದ ಸುಮಾರು ನಲವತ್ತರ ಪ್ರಾಯದವರೊಬ್ಬರು, ‘ಸಾರ್, ತಾವು ವಿಶ್ವೇಶ್ವರ ಭಟ್ಟರಲ್ಲವಾ? ನಾನು ನಿಮ್ಮ ಅಭಿಮಾನಿ. ಪ್ರತಿವಾರ ಅಂಕಣ ಓದುತ್ತೇನೆ. ನಾನು ಕಳೆದ ಎಂಟು ವರ್ಷಗಳಿಂದ ದಿಲ್ಲಿಯಲ್ಲಿ ಇದ್ದೇನೆ. ಸಿಬಿಐನಲ್ಲಿ ಕೆಲಸ. ನಾನು ಪುತ್ತೂರಿನವನು. ನಿಮಗೆ ತುಳು ಬರುತ್ತಾ?’ ಎಂದು ಕೇಳಿದರು. ಅಷ್ಟೊತ್ತಿಗೆ ಹೇಮಂತ ಶೆಟ್ಟಿ ಬಂದರು. ಹೇಮಂತ್‌ಗೆ ಆಗ ತಾನೆ ತಾಜಾ ಸಿಬಿಐ ಅಧಿಕಾರಿಯನ್ನು ಪರಿಚಯಿಸಿದೆ. ನಾನು ಇಬ್ಬರನ್ನೂ ಪರಸ್ಪರ ಪರಿಚಯಿಸುವಾಗ ‘ಇವರು (ಸಿಬಿಐ ಅಧಿಕಾರಿ) ಪುತ್ತೂರಿನವರು, ಇವರು (ಹೇಮಂತ) ಶೆಟ್ಟಿ, ಮೂಲ್ಕಿಯವರು’ ಎಂದೆ.

ತಟ್ಟನೆ ‘ವೈಫೈ ಸಿಗ್ನಲ್’ ಜಾಗೃತವಾಗಿಬಿಟ್ಟಿತು!
ಇಬ್ಬರೂ ತುಳು ಪಾಸ್‌ವರ್ಡ್ ಹಾಕಿದ್ದೇ ಹಾಕಿದ್ದು ಕನೆಕ್ಟ್ ಆಗಿಬಿಟ್ಟರು. ಅವರಿಬ್ಬರೂ ಬಾಲ್ಯದ ಗೆಳೆಯರಂತೆ, ಅವರು ಗೊತ್ತಾ, ಇವರು ಗೊತ್ತಾ, ಅವರು ನನ್ನ ಮಾವ, ಇವರು ನನ್ನ ಸೋದರತ್ತೆ, ಇವರು ನನಗೆ ತೀರಾತೀರ ಆಪ್ತರು.. ಎಂದು ಇಬ್ಬರೂ ಆಪ್ತ ಮಾತುಕತೆಯಲ್ಲಿ ನಿರತರಾಗಿಬಿಟ್ಟರು. ನಾನು ಆ ಕ್ಷಣದಿಂದಲೇ ‘ಕವರೇಜ್ ಕ್ಷೇತ್ರ’ದಿಂದ ದೂರವಾಗಿಬಿಟ್ಟೆ. ಇಬ್ಬರೂ ನನ್ನನ್ನು ಬಾಳೆ ಎಲೆಯ ತುದಿಗಿರುವ ಬೇವಿನ ಸೊಪ್ಪಿನಂತೆ ಮೂಲೆಗಿಟ್ಟಿದ್ದರು! ಆನಂತರ ಸಿಬಿಐ ಅಧಿಕಾರಿ ನಮ್ಮನ್ನು ಊಟಕ್ಕೆ ಒತ್ತಾಯ ಮಾಡಿ ಕರೆದುಕೊಂಡು ಹೋದರು. ಅವರಿಬ್ಬರೂ ತುಳುನಲ್ಲಿಯೇ ಮಾತಾಡುತ್ತಿದ್ದರು. ಮಧ್ಯೆಮಧ್ಯೆ ನನ್ನ ಜತೆ ಕನ್ನಡದಲ್ಲಿ ಮಾತಾಡುತ್ತಿದ್ದರು. ಅಷ್ಟರಮಟ್ಟಿಗೆ ನಾನು ಅವರ ಮದ್ಯೆ ಕಿರಿಕಿರಿಯಾಗಿದ್ದೆ. ಆದರೆ ನನಗೆ ಅವರ ತುಳು ಪ್ರೀತಿ ಕಂಡು ಹೃದಯ ತುಂಬಿ ಬಂತು. ಒಬ್ಬರು ಓದುಗರು ಬಹಳ ವರ್ಷಗಳಿಂದ ನನ್ನ ಅಂಕಣ ಬರಹಗಳನ್ನು ಓದುತ್ತಿದ್ದಾರೆ. ವಾರವಾರವೂ ಓದುತ್ತಾರೆ. ಮತ್ತೊಬ್ಬರು ನನ್ನ ಬಹುಕಾಲದ ಆಪ್ತ ಗೆಳೆಯರು. ಆದರೆ ಅವರಿಬ್ಬರೂ ಗುರುತು-ಪರಿಚಯವೇ ಇಲ್ಲ. ಯಾವಾಗ ಒಬ್ಬರಿಗೆ ತುಳು ಗೊತ್ತೆಂದ ಮತ್ತೊಬ್ಬರಿಗೆ ಅನಿಸಿತೋ, ಇಬ್ಬರೂ ಅನೋನ್ಯರಾಗಿಬಿಟ್ಟರು. ಕೊರಳ ಗೆಳೆಯರಾಗಿಬಿಟ್ಟರು. ಕೆಲಕಾಲ ನನ್ನನ್ನು ಪಕ್ಕಕ್ಕೆ ಸರಿಸಿಬಿಟ್ಟರು. ತುಳು ನೆಪದಲ್ಲಿ ಪ್ರಧಾನಿಯನ್ನೇ ಪಕ್ಕಕ್ಕೆ ಇಟ್ಟು ಬರುವವರಿಗೆ ನಾನ್ಯಾವ ಲೆಕ್ಕ?

*ತುಳು ಭಾಷೆಯಲ್ಲಿ ಅದೆಂಥ ಸೆಳೆತವಿರಬಹುದು?* ನನಗೆ ಇಂದಿಗೂ ಇದು ವಿಸ್ಮಯವೇ. ನಾನು ಎಲ್ಲಾ ಖಂಡಗಳನ್ನು ಅಲೆದಾಡಿ ಬಂದಿದ್ದೇನೆ. ಭಾಷೆ ಅಂದರೆ ಅಪ್ರತಿಮ ಕಾಳಜಿ, ಪ್ರೀತಿ ಮೆರೆಯುವ ಜರ್ಮನ್‌ರನ್ನು, ಫ್ರೆಂಚ್‌ರನ್ನು ಡಚ್‌ರನ್ನು, ಸ್ಪೆನಿಶ್ ಐಸ್‌ಲ್ಯಾಂಡಿಗರನ್ನು ಕಂಡಿದ್ದೇನೆ. ಆದರೆ ತುಳುವರ ಭಾಷಾ ಪ್ರೇಮ ಇವರೆಲ್ಲರನ್ನೂ ಮೀರಿಸುವಂಥದ್ದು. ಇವರದು ನಿರ್ವಾಜ್ಯ ಪ್ರೇಮ. ತುಳುನಲ್ಲಿ ಮಾತಾಡಿದರೆ ಸಾಕು ಇವ ನಮ್ಮವ, ಇವ ನಮ್ಮವ ಎಂಬ ಭಾವನೆ ಅವರ ಅಪದಮನಿ, ಅಭಿದಮನಿಗಳಲ್ಲಿ, ಹೃತ್ಕರ್ಣ, ಹೃತ್ಕುಕ್ಷಿಗಳಲ್ಲಿ ತನ್ನಿಂದ ತಾನೇ ಹರಿಯಲಾರಂಭಿಸುತ್ತದೆ, ಅವರು ಯಾವುದೇ ಧರ್ಮ, ಜಾತಿ, ಮೇಲು-ಕೀಳು, ಬಡವ-ಬಲ್ಲಿದ, ಹೆಣ್ಣು-ಗಂಡು, ಹೀಗೆ ಯಾರೇ ಆಗಲಿ, ನೇರವಾಗಿ ಭಾವಕೋಶಗಳಿಂದ ಬೆಸೆಯುವ, ಕರುಳ ಬಳ್ಳಿಯೊಂದಿಗೆ ಗಂಟು ಹಾಕುವ ಅದ್ಭುತವಾದ, ವಿಸ್ಮಯಗೊಳಿಸುವ, ಮಂತ್ರಮುಗ್ಧಗೊಳಿಸುವ ತಾಕತ್ತು ತುಳು ಭಾಷೆಗಿದೆ.

ಅಷ್ಟಕ್ಕೂ ತುಳು ಭಾಷೆಯನ್ನು ಪ್ರಾಥಮಿಕ ಶಾಲೆಯಿಂದೇನೂ ಕಲಿಸಿಲ್ಲ. *ಕಲಿಕೆಯಲ್ಲೂ ಕಡ್ಡಾಯಗೊಳಿಸಿಲ್ಲ. ತುಳು ರಕ್ಷಣಾ ವೇದಿಕೆ, ತುಳು ಕಾವಲು ಸಮಿತಿ, ತುಳು ಕ್ರಿಯಾ ಸಮಿತಿಗಳೂ ಇಲ್ಲ. ತುಳು ವಿಶ್ವವಿದ್ಯಾಲಯವಿಲ್ಲ. ತುಳು ಅಭಿವೃದ್ಧಿ ಪ್ರಾಧಿಕಾರವಿಲ್ಲ. ತುಳು ಸಂಸ್ಕೃತಿ ಇಲಾಖೆಯೂ ಇಲ್ಲ. ಅದಕ್ಕೊಬ್ಬ ಸಚಿವರಂತೂ ಇಲ್ಲವೇ ಇಲ್ಲ. ಹೇಳಿಕೇಳಿ, ಸರಕಾರ ಅಕಾಡೆಮಿ ಎಂಬುದನ್ನು ಕಾಟಾಚಾರಕ್ಕೆ ನೇಮಿಸಿದೆ. ಅದಕ್ಕೆ ಐದುಕೋಟಿಗಿಂತ ಹೆಚ್ಚು ಅನುದಾನವಿರುವುದೂ ಸಂದೇಹ. ಇದನ್ನು ಬಿಟ್ಟರೆ ಸರಕಾರ ಯಾವುದೇ ಸಹಾಯ, ಬೆಂಬಲ ತುಳು ಭಾಷೆಗಿಲ್ಲ. ಅಂದರೆ ಅದಕ್ಕೆ ರಾಜಾಶ್ರಯವೇ ಇಲ್ಲ.

ಆದರೆ ಯಾರಾದರೂ ತುಳು ಭಾಷೆಗೆ ಅಪಾಯ ಬಂದಿದೆ, ತುಳು ನಶಿಸಿ ಹೋಗಲಿದೆ, ತುಳು ಭಾಷೆಗೆ ಕುತ್ತು ಬಂದಿದೆ, ತುಳು ಭಾಷಿಕರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಯಾರಾದರೂ ಹಲುಬುವುದನ್ನು, ಕೊರಗುವುದನ್ನು, ಮರುಗುವುದನ್ನು ನೋಡಿದ್ದೀರಾ, ಕೇಳಿದ್ದೀರಾ? ಇಲ್ಲವೇ ಈ ವಿಷಯಗಳ ಬಗ್ಗೆ ಲೇಖನ ಓದಿದ್ದೀರಾ? ಸಾಧ್ಯವೇ ಇಲ್ಲ.

ಸಾಧ್ಯವೇ ಇಲ್ಲ. ಜಾಗತಿಕರಣದ ಚಂಡಮಾರುತ ಬೀಸಲಿ, ಇಂಗ್ಲಿಷಿನ ಸುನಾಮಿ ಅಪ್ಪಳಿಸಲಿ ತುಳುಗೆ ಮಾತ್ರ ಏನೂ ಆಗಿಲ್ಲ, ಆಗುವುದೂ ಇಲ್ಲ. ತುಳುವನ್ನು ಕಡ್ಡಾಯ ಮಾತಾಡಲೇಬೇಕು ಎಂಬ ಕಾನೂನು ರೂಪಿಸುವ ಅವಶ್ಯಕತೆಯೂ ಇಲ್ಲ. ಅಸಲಿಗೆ, ತುಳು ಭಾಷೆಗೆ ಏನೂ ಆಗಿಯೇ ಇಲ್ಲ. ಅದು ಉಳಿದೆಲ್ಲ ಭಾಷೆಗಳಿಗಿಂತ ಭದ್ರವಾಗಿ ಬೆಚ್ಚಗೆ ಇದೆ.

ಎಲ್ಲಾ ಕನ್ನಡಿಗರೂ ತುಳು ಮಾತಾಡುವುದಿಲ್ಲ. ಆದರೆ ತುಳು ಮಾತಾಡುವವರೆಲ್ಲ ಕನ್ನಡಿಗರೇ. ಹೀಗಿದ್ದೂ ತುಳುಗೆ ಯಾವ ಇಲ್ಲ. ಎದುರಿಗಿರುವವರು ಬಾಯಿಬಿಟ್ಟರೆ ಸಾಕು, ತುಳು ವಾಸನೆ ಹೊಡೆದರೆ, ನಾಲಗೆ ಕುಯ್ದರೂ ತುಳು ಹೊರತಾಗಿ ಬೇರೆ ಭಾಷೆಯಲ್ಲಿ ಮಾತಾಡುವುದಿಲ್ಲ. ಕೆಲವು ಸಲ ಎದುರಿಗಿರುವವರು ಯಾರೇ ಆಗಲಿ, ತುಳು ಬರುವುದಿಲ್ಲ ಎಂದು ಗೊತ್ತಿದ್ದರೂ, ತುಳುನಲ್ಲಿಯೇ ಮಾತಾಡುತ್ತಾರೆ. ಕಾರಣ ನಾಲಗೆ ಹಾಗೂ ಹೃದಯದ ಮೇಲ್ಪದರ ತುಳುನಿಂದ ಆವೃತ!

ಮತ್ತೇನೂ ಅಲ್ಲ, ಕನ್ನಡಿಗರಿಗೆ, ಕನ್ನಡಕ್ಕೆ ಇಂದು ಬೇಕಾಗಿರುವುದು ಈ ತುಳುವರಲ್ಲಿ ಇರುವಂಥ ಅಪ್ಪಟ ಅಪರಂಜಿಯಂಥ ಭಾಷಾಪ್ರೇಮ. ಅದೊಂದು ಇದ್ದರೆ ಜಯಮಾಲಾಳೂ ಬೇಡ, ನಾರಾಯಣಗೌಡರೂ ಅಕಾಡೆಮಿ, ಪ್ರಾಧಿಕಾರ, ವಿಶ್ವವಿದ್ಯಾಲಯಗಳೂ ಬೇಡ. ಇಬ್ಬರು ಕನ್ನಡಿಗರು ಭೇಟಿಯಾದರೆ ಕನ್ನಡದಲ್ಲಿ ಮಾತಾಡಲು ಅನುಮಾನಪಡುತ್ತಾರೆ, ಕೆಲವರಂತೂ ಕನ್ನಡ ಬಂದರೂ ಬರದವರಂತೆ ನಾಟಕವಾಡುತ್ತಾರೆ. ‘ನನಗೆ ಕನ್ನಡ ಬರುವುದಿಲ್ಲ’ ಎಂದು ನಾಚಿಕೆಬಿಟ್ಟು, ಗರ್ವದಿಂದ ಹೇಳಿಕೊಳ್ಳುತ್ತಾರೆ. ಇಂಗ್ಲಿಷ್‌ನಲ್ಲಿ ಮಾತಾಡುವುದು ಪ್ರತಿಷ್ಠೆ ವಿಷಯವಾಗಿಬಿಟ್ಟಿದೆ. ಅವನೆಂಥ ವಿಜ್ಞಾನಿಯೇ ಆಗಿರಬಹುದು, ಎದುರು ಬಂದವರಿಗೆ ತುಳು ಬರುತ್ತದೆಂಬುದು ಗೊತ್ತಾದರೆ, ಆತ ತುಳುನಲ್ಲಿಯೇ ಮಾತಾಡುತ್ತಾನೆ. ಈ ತುಳು ಭಾಷಿಕರು ಅನ್ಯಗ್ರಹಗಳಿಂದ ಬಂದವರಲ್ಲ, ಹೊರನಾಡು ಅಥವಾ ಪಕ್ಕದ ನಾಡಿನವರೂ ಅಲ್ಲ. ಅವರು ನಮ್ಮವರೇ. ನಮಗೆ ಕನ್ನಡ ಕಲಿಕೆಗೆ ಮಾರ್ಗದರ್ಶಕರು. ಅವರು ಭಾಷಾಪ್ರೇಮವೇ ನಮಗೆ ದಾರಿದೀಪ. ಬಳಸುವ ಮೂಲಕವೇ ಭಾಷೆಯನ್ನು ಬೆಳೆಸಬಹುದು ಹಾಗೂ ಉಳಿಸಬಹುದು ಎಂಬುದಕ್ಕೆ ಅವರೇ ನಮಗೆ ನಿದರ್ಶನ. ಕನ್ನಡದ ಬಗ್ಗೆ ನಿರಾಶದಾಯಕವಾಗಿ ಮಾತಾಡುವವರು ನಮ್ಮವರೇ ಆದ ತುಳುವರ ಭಾಷಾಪ್ರೇಮ ಮೈಗೂಡಿಸಿಕೊಳ್ಳಬೇಕು, ಪ್ರೇರಣೆ ಪಡೆಯಬೇಕು.

ಕನ್ನಡಕ್ಕೆ ತಟ್ಟಿದ ಜಾಡ್ಯ ಬಿಡಿಸುವ ಮದ್ದು ನಮ್ಮ ಹಿತ್ತಲಲ್ಲೇ ಇದೆ. ಕಿರಿತಮ್ಮನೇ ದೊಡ್ಡಣ್ಣನನ್ನು ಬದುಕಿಸಬೇಕಿದೆ!

Leave a Reply

Your email address will not be published. Required fields are marked *